ಪ್ರೇಮಚಂದ್
	1880-1936. ಈ ಶತಮಾನದ ಹಿಂದಿ ಸಾಹಿತ್ಯದ ಶ್ರೇಷ್ಠ ಕಾದಂಬರಿಗಾರ ಹಾಗೂ ಕತೆಗಾರ. ಸಾಹಿತ್ಯ ಸಾಮ್ರಾಟ್ ಎನಿಸಿಕೊಂಡವರು. ಹುಟ್ಟಿದ್ದು ವಾರಾಣಸಿಗೆ ನಾಲ್ಕು ಮೈಲಿ ದೂರದಲ್ಲಿರುವ ಲಮಹಿ ಎಂಬ ಗ್ರಾಮದಲ್ಲಿ, 1880ರ ಜುಲೈ 31ರಂದು ಜನಿಸಿದರು. ತಂದೆ ಅಜಾಯಬ್‍ಲಾಲ್ ತಾಯಿ ಆನಂದೀದೇವಿ. ಹುಟ್ಟುಹೆಸರು ಧನಪತ್‍ರಾಯ್. ಮುಂದೆ ಸರ್ಕಾರಿ ನೌಕರಿ ಸೇರಿದಾಗ ನವಾಬ್‍ರಾಯ್ ಎಂಬ ಹೆಸರಿನಿಂದ ಬರೆಯಲಾರಂಭಿಸಿದರು. ಸರ್ಕಾರ ಇವರ ಮೊಟ್ಟಮೊದಲ ಕಥಾಸಂಗ್ರಹ "ಸಾಜೆóವತನ್" ಅನ್ನು ಮುಟ್ಟುಗೋಲು ಹಾಕಿಕೊಂಡಾಗ ತಮ್ಮ ಕಾವ್ಯನಾಮವನ್ನು ಪ್ರೇಮಚಂದ್ ಎಂದು ಬದಲಿಸಿಕೊಂಡು ಬರೆಯತೊಡಗಿದರು.

ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ತಮ್ಮ ಬಾಲ್ಯದ ದಿನಗಳನ್ನು ಬಡತನದಲ್ಲಿ ಕಳೆದರು. ಎಳೆತನದಲ್ಲಿಯೇ ತಾಯಿಯನ್ನು ಕಳೆದುಕೊಂಡು ಒಂದು ಬಗೆಯ ಒಂಟಿತನ, ಅನಾಥಭಾವವನ್ನು ಬೆಳಸಿಕೊಂಡು ಅದರಿಂದ ಪಾರಾಗಲು ಮನಸ್ಸನ್ನು ಪುಸ್ತಕಗಳತ್ತ ಹರಿಸಿದರು. ಹೆಚ್ಚು ಓದದ ಇವರು 1899ರಲ್ಲಿ ಒಂದು ಮಿಷನರಿ ಸ್ಕೂಲಿನಲ್ಲಿ ಅಧ್ಯಾಪಕರಾಗಿ ಸೇರಿಕೊಂಡು ಅನಂತರ ಪ್ರಯಾಗ್ ವಿಶ್ವವಿದ್ಯಾನಿಲಯದಿಂದ ಬಿ.ಎ. ಪರೀಕ್ಷೆ ಪಾಸುಮಾಡಿದರು. 15ನೆಯ ವಯಸ್ಸಿನಲ್ಲಿಯೇ ಇವರಿಗೆ ವಿವಾಹ ಆಯಿತು. ಮೊದಲ ಹೆಂಡತಿ ಕುರೂಪಿ, ಅಸಭ್ಯೆ. ಜಗಳಗಂಟಿ ಸ್ವಭಾವದವಳಾದುದರಿಂದ ಆಕೆ ಇವರಿಗೆ ತಕ್ಕ ಸಂಗಾತಿಯಾಗಲಿಲ್ಲ. ಹೀಗಾಗಿ ತೀವ್ರ ಅತೃಪ್ತಿ, ಅಸಮಾಧಾನ, ಅಶಾಂತಿಯಿಂದಿದ್ದ ಇವರ ಮನಸ್ಸು ಎರಡನೆಯ ವಿವಾಹದತ್ತ ತಿರುಗಿತು. 1916ರಲ್ಲಿ ಬಾಲವಿಧವೆ ಶಿವರಾಣಿ ದೇವಿಯನ್ನು ವಿವಾಹವಾದರು.

1918ರಲ್ಲಿ ಪ್ರಕಟವಾದ ಇವರ ಮೊದಲ ಕಾದಂಬರಿ "ಸೇವಾ ಸದನ" ಹಿಂದೀ ಕಾದಂಬರಿ ಇತಿಹಾಸದಲ್ಲಿ ಮಹತ್ತ್ವಪೂರ್ಣವೆನಿಸಿತು. ಇದಕ್ಕೂ ಮುಂಚೆ ಉರ್ದುವಿನಲ್ಲಿ ಪ್ರೇಮಾ ಅರ್ಥಾತ್ ದೋ ಸಖಿಯೋಂ ಕಾ ವಿವಾಹ್, ದೇವಸ್ಥಾನ್ ರಹಸ್ಯ, ಕಿಸನಾ, ರೂಠೀ ರಾಣಿ-ಮುಂತಾದ ಕಾದಂಬರಿಗಳನ್ನು ಬರೆದಿದ್ದರಾದರೂ ಇವರ ಜೀವನದರ್ಶನ ರೂಪುಗೊಂಡದ್ದು ಸೇವಾಸದನ ಪ್ರಕಟವಾದ ಮೇಲೆಯೇ.

ಸೇವಾಸದನದ ಅನಂತರ ಪ್ರೇಮಾಶ್ರಮ್ (1922). ರಂಗಭೂಮಿ (1925) ಕಾಯಕಲ್ಪ್ (1926). ನಿರ್ಮಲಾ (1927), ಗಬನ್ (1931), ಕರ್ಮಭೂಮಿ (1933) ಮತ್ತು ಗೋದಾನ (1935) ಕಾದಂಬರಿಗಳು ಹೊರಬಂದುವು. ಜೊತೆಗೆ ಹಿಂದೆ ತಾವು ಉರ್ದುವಿನಲ್ಲಿ ಬರೆದಿದ್ದ ಕಾದಂಬರಿಗಳನ್ನು ಸ್ವತಃ ಹಿಂದಿಗೆ ಅನುವಾದ ಮಾಡಿ ವರದಾನ್ (1921) ಹಾಗೂ ಪ್ರತಿಜ್ಞಾ (1929) ಎಂಬುವನ್ನು ಪ್ರಕಟಿಸಿದರು. ಹಾಗೆ ನೋಡಿದರೆ ಇವರು ತಮ್ಮ ಬಹಳಷ್ಟು ಕಾದಂಬರಿಗಳನ್ನು ಉರ್ದುವಿನಲ್ಲಿ ಬರೆದು ಕ್ರಮೇಣ ಅವನ್ನು ಹಿಂದಿಗೆ ತಾವೇ ಅನುವಾದಿಸಿದರು.

ನಿಜವಾಗಿ ಇವರು ಸಾಹಿತ್ಯವನ್ನು ಮನರಂಜನೆಯಿಂದ ಮೇಲೆತ್ತಿ ಬದುಕಿನೊಂದಿಗೆ ಅದನ್ನು ಸಂಸ್ಥಾಪಿಸಿ ಸಾಹಿತ್ಯದ ಅರ್ಥವನ್ನು ಶ್ರೀಮಂತಗೊಳಿಸಿ, ತಮ್ಮ ಸುತ್ತಮುತ್ತಲ ಬದುಕು, ಬದುಕಿನ ಹಲವು ಸಮಸ್ಯೆಗಳಾದ ಪರಾಧೀನತೆ, ಜಮೀನ್ದಾರರು, ಬಂಡವಾಳಗಾರರ, ಹಾಗೂ ಸರ್ಕಾರಿ ಅಧಿಕಾರಿಗಳಿಂದ ರೈತರ ಶೋಷಣೆ, ಬಡತನ, ನಿರಕ್ಷರತೆ, ಅಂಧವಿಶ್ವಾಸ, ವರದಕ್ಷಿಣೆ, ಮನೆ ಮತ್ತು ಸಮಾಜದಲ್ಲಿ ನಾರಿಯ ಸ್ಥಾನ-ಮಾನ, ವೇಶ್ಯೆಯರ ಬದುಕು, ವೃದ್ಧರ ವಿವಾಹ, ವಿಧವಾ ಸಮಸ್ಯೆ, ಅಸ್ಪøಶ್ಯತಾ ಸಮಸ್ಯೆ, ಮಧ್ಯಮವರ್ಗದ ಸಂಸಾರದ ನೂರು ನೋವುಗಳನ್ನು ಕುರಿತು ಚಿಂತಿಸಿ ತಮ್ಮ ಕೃತಿಗಳಲ್ಲಿ ಅವನ್ನು ಅಭಿವ್ಯಕ್ತಿಸಿದರು.

ಗೋದಾನ ಇವರ ಶ್ರೇಷ್ಠ ಕಾದಂಬರಿಗಳಲ್ಲೊಂದು. ಬೇರೆ ಯಾವ ಕಾದಂಬರಿಯೂ ಭಾರತೀಯ ರೈತನ ಬದುಕನ್ನು ಇದರಷ್ಟು ವಿವರವಾಗಿ ರಮ್ಯವಾಗಿ ಚಿತ್ರಿಸಿಲ್ಲ. ಕಾದಂಬರಿಯ ನಾಯಕ ಹೋರಿ ಇಡೀ ಭಾರತದ ರೈತರ ಪ್ರತಿನಿಧಿ, ಶತ ಶತಮಾನಗಳಿಂದ ಶೋಷಣೆಗೊಳಗಾಗಿ ಸಾವಿರ ನೋವುಗಳನ್ನನುಭವಿಸುತ್ತ ಇಂದೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಂಘರ್ಷಿಸುತ್ತಲಿರುವ ಮಾನವೀಯ ಭಾವನೆಗಳ ಮೂರ್ತರೂಪ.

	ಹಿಂದಿ ಕಾದಂಬರಿ ಕ್ಷೇತ್ರದಲ್ಲಿ ಇವರು ಹೇಗೆ ಅದ್ವಿತೀಯರೋ ಹಾಗೆಯೇ ಕಥಾ ಸಾಹಿತ್ಯದಲ್ಲೂ ಇವರದು ಭೂಮ ವ್ಯಕ್ತಿತ್ವ. ಪ್ರಮಾಣ ಹಾಗೂ ಗುಣ ಈ ಎರಡು ದೃಷ್ಟಿಯಿಂದಲೂ ಹಿಂದಿ ಕಥಾಸಾಹಿತ್ಯವನ್ನು ಸುದೃಢವಾಗಿ ನೆಲೆಗೊಳಿಸಿ ಅದರ ವಿಕಾಸಕ್ಕೆ ಕಾರಣರಾದವರು ಇವರು. 1918 ರಿಂದ 1936ರ ಅವಧಿಯಲ್ಲಿ ಇವರು ಬರೆದ 250ಕ್ಕೂ ಹೆಚ್ಚು ಕತೆಗಳು ಬದುಕಿನ ಸ್ವೋಪಜ್ಞತೆಯನ್ನು, ರಮ್ಯತೆಯನ್ನು ನಿರೂಪಿಸಿರುವಂತೆ ಯಥಾರ್ಥತೆಯನ್ನೂ ತಮ್ಮಲ್ಲಿ ಮೈಗೂಡಿಸಿಗೊಂಡಿವೆ. ತಮ್ಮ ಸಾಹಿತ್ಯಕ ಬದುಕಿನ ಆರಂಭದ ದಿನಗಳಲ್ಲಿ ಇವರು ಬರೆದ ಕತೆಗಳಲ್ಲಿ ಆದರ್ಶದ ನಿರೂಪಣೆ ಹೆಚ್ಚಿರುವುದು ನಿಜವಾದರೂ ಅನಂತರ ಮನೋವೈಜ್ಞಾನಿಕ ವಿಶ್ಲೇಷಣೆಯನ್ನು ಆಧರಿಸಿ ಬರೆದ ಕತೆಗಳಲ್ಲಿ ಮಾನವ ಸ್ವಭಾವದ ವಿಶ್ಲೇಷಣೆ ಇದ್ದು ಓದುಗರನ್ನು ಆತ್ಮೀಯಗೊಳಿಸಿಕೊಳ್ಳುವ ಸಾಮಥ್ರ್ಯ ಪಡೆದಿವೆ. ಬಲಿದಾನ, ಆತ್ಮಾರಾಮ್, ಬೂಢೀ ಕಾಕೀ, ಹಾರ್-ಕೀ-ಜೀತ್, ಸವಾಸೇರ್ ಗೇಹೂಂ, ಅಲಗ್ಯೋಝಾ, ಈದ್‍ಗಾಹ್, ಬಡೇ ಭಾಯೀ-ಸಾಹಬ್, ಮಾತಾ ಕಾ ಹೃದಯ್- ಮುಂತಾದವು ಅಂಥ ಕತೆಗಳಲ್ಲಿ ಕೆಲವು. ಕಾದಂಬರಿಗಳಲ್ಲಿ ಹೇಗೋ ಹಾಗೆ ಇವರ ಕತೆಗಳಲ್ಲೂ ಗ್ರಾಮೀಣ ಬದುಕಿನ ಚಿತ್ರಣಕ್ಕೇ ಹೆಚ್ಚು ಒತ್ತು ಇದೆ. ಜೊತೆಗೆ ಸತ್ಯಾಗ್ರಹ ಆಂದೋಲನ, ಸ್ಕೂಲು-ಕಾಲೇಜುಗಳ ವಾತಾವರಣದ ಚಿತ್ರಣ, ಜಮೀನ್ದಾರರ, ಸಾಹುಕಾರರ, ಗುಮಾಸ್ತರ ಹಾಗೂ ಹಿರಿಯ ಅಧಿಕಾರಿಗಳ ಬದುಕಿನ ಹಲವು ರೂಪಗಳ ವೈವಿಧ್ಯಮಯ ಚಿತ್ರಣವೂ ಇವರ ಕಥಾಸಾಹಿತ್ಯದಲ್ಲಿ ಹೇರಳವಾಗಿ ಮೂಡಿಬಂದಿವೆ. ಪ್ರೇಮಚಂದ್ರರದು ಬದುಕಿನುದ್ದಕ್ಕೂ ಬರೀ ಕಹಿಯುಂಡ ಜೀವ. ಹೊಟ್ಟೆಪಾಡಿಗಾಗಿ ತಮ್ಮ ವ್ಯಕ್ತಿಗತ ಬದುಕಿನಲ್ಲಿ ತೀವ್ರವಾದ ಕಷ್ಟಗಳನ್ನು ಅನುಭವಿಸುತ್ತಿದ್ದುದರಿಂದ ದಿನೇ ದಿನೇ ಎದುರಾಗುತ್ತಿದ್ದ ಆರ್ಥಿಕ ಸಮಸ್ಯೆಗಳು ಇವರನ್ನು ಹಣ್ಣಾಗಿಸುತ್ತಿದ್ದುವು. ಈ ಮನಃಸ್ಥಿತಿಯಲ್ಲಿ ಸರ್ಕಾರಿ ನೌಕರಿಯನ್ನು ಬಿಟ್ಟು ಸ್ವತಂತ್ರ ಬರಹಗಾರನಾಗಿ ಪತ್ರಕರ್ತನಾಗಿ ಮುದ್ರಣಾಲಯದ ಮಾಲೀಕನಾಗಿ ಸ್ವಂತಶ್ರಮದಿಂದ ಬದುಕುವ ತಮ್ಮ ಆರ್ಥಿಕಸ್ಥಿತಿಯನ್ನು ಸುಧಾರಿಸಿಕೊಳ್ಳುವ ಯೋಜನೆ ಹಾಕಿಕೊಂಡರು. ತಮ್ಮ ಹುಟ್ಟೂರಾದ ಲಮಹಿಯಲ್ಲಿದ್ದುಕೊಂಡು ಬರವಣಿಗೆಯಲ್ಲಿ ನಿರತರಾದುದಲ್ಲದೆ ಗಾಂಧೀ ವಿಚಾರದರ್ಶನದ ಪ್ರಚಾರ ಕೈಗೊಂಡರು. ಈ ಮಧ್ಯೆ ಸಂಸಾರದಲ್ಲಿನ ಸಮಸ್ಯೆಗಳು ಉಲ್ಬಣಗೊಂಡಾಗ ತಮ್ಮ ಊರನ್ನೇ ಬಿಟ್ಟು ಕಾನ್‍ಪುರಕ್ಕೆ ಹೋಗಿ ಅಲ್ಲಿನ ಮಾರ್ವಾಡಿ ಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾದರು. ಅಲ್ಲಿನ ವಾತಾವರಣ ಸರಿಬೀಳಲಿಲ್ಲವಾದ್ದರಿಂದ ರಾಜೀನಾಮೆ ಕೊಟ್ಟು ಮತ್ತೆ ವಾರಾಣಸಿಗೆ ಬಂದು ಮರ್ಯಾದಾ ಪತ್ರಿಕೆಯ ಪ್ರಕಟಣೆಯಲ್ಲಿ ನೆರವಾಗುವುದರ ಜೊತೆಗೆ ಆಜ್ ಪತ್ರಿಕೆಗೆ ಬರೆಯತೊಡಗಿದರು. ಇದೇ ಸಂದರ್ಭದಲ್ಲಿ ಸರಸ್ವತೀ ಪ್ರೆಸ್ ಎಂಬ ಹೆಸರಿನಲ್ಲಿ ಮುದ್ರಣಾಲಯವನ್ನು ತೆರೆದರು.

	ಹಿಂದೀ ಪತ್ರಿಕೋದ್ಯಮದಲ್ಲೂ ಇವರು ನಡೆಸಿದ ಪ್ರಯೋಗಗಳು ಒಂದು ದೃಷ್ಟಿಯಲ್ಲಿ ಇವರ ಸಾಹಸೀ ಮನೋವೃತ್ತಿಯನ್ನೇ ಪ್ರತಿಬಿಂಬಿಸುತ್ತವೆ. ಇವರು ಸ್ವಂತ ಮುದ್ರಣಾಲಯ ತೆರೆದು ಸಾಕಷ್ಟು ಬಳಲಿದ್ದರೂ 'ಹಂಸ ಎಂಬ ಕಥಾಪ್ರಧಾನ ಪತ್ರಿಕೆಯನ್ನು ಪ್ರಾರಂಭಿಸಿದರು. ಇದರಲ್ಲಿ ರಾಜಕೀಯವನ್ನು ಕುರಿತು ಬರೆದು ಅಂದಿನ ಸರ್ಕಾರದ ಕೋಪಕ್ಕೆ ಬಲಿಯಾದರು. ಹಂಸ ಪತ್ರಿಕೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಿರಲಿಲ್ಲವಾದರೂ ಸಾಹಸಮಾಡಿ ವಿನೋದಶಂಕರ ವ್ಯಾಸರು ನಡೆಸುತ್ತಿದ್ದ ಜಾಗರಣ ಎಂಬ ಪಾಕ್ಷಿಕ ಪತ್ರಿಕೆಯ ಮಾಲೀಕತ್ವವನ್ನು ಪಡೆದು ಅದನ್ನು ಸಾಪ್ತಾಹಿಕವನ್ನಾಗಿ ಪರಿವರ್ತಿಸಿ ತಮ್ಮ ಸಂಪಾದಕತ್ವದಲ್ಲಿ ಅದರ ಮೊದಲ ಸಂಚಿಕೆಯನ್ನು 1930ರ ಆಗಸ್ಟ್‍ನಲ್ಲಿ ಹೊರತಂದರು. ಅಲ್ಲಿಂದ ಆರ್ಥಿಕ ಸ್ಥಿತಿ ಬಿಗಡಾಯಿಸತೊಡಗಿದಾಗ ಅವುಗಳ ಖರ್ಚನ್ನು ಸರಿದೂಗಿಸಲು ಮುಂಬಯತ್ತ ಪ್ರಯಾಣ ಬೆಳೆಸಿ ಅಲ್ಲಿ ಚಲನಚಿತ್ರಗಳಿಗೆ ಸಾಹಿತ್ಯ ಬರೆಯಲಾರಂಭಿಸಿದರು. ಅಲ್ಲೂ ವಾತಾವರಣ ಸರಿಬೀಳದೆ ಹಿಂತಿರುಗಿದರು. ಹೀಗೆ ಇವರು ಬದುಕಿಗಾಗಿ ತಾವು ನಂಬಿದ ಮೌಲ್ಯಗಳಿಗಾಗಿ ಬದುಕಿನುದ್ದಕ್ಕೂ ಅಲೆಮಾರಿಯಾಗಿ ಅಲೆದರು. ಕೊನೆಗೆ ಜಾಗರಣ ಪತ್ರಿಕೆ ಕೆಲಕಾಲದ ಅನಂತರ ನಿಂತಿತು. ಹಂಸವನ್ನು ಭಾರತೀಯ ಸಾಹಿತ್ಯ ಪರಿಷತ್ತಿಗೆ ವಹಿಸಲಾಯಿತು.

	ಪ್ರೇಮಚಂದರು ವಿಶ್ವಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿದ್ದುದೇ ಅಲ್ಲದೆ ಟಾಲ್‍ಸ್ಟಾಯ್, ಗಾಲ್ಸ್‍ವರ್ದಿ, ಮೋಪಾಸಾ ಕೃತಿಗಳನ್ನು ಹಿಂದಿಗೆ ಅನುವಾದಿಸಿದರು. ಗಾರ್ಕಿ ಇವರ ಮೆಚ್ಚಿನ ಲೇಖಕರಲ್ಲಿ ಒಬ್ಬ. ಹಿಂದಿಯ ಗಾರ್ಕಿ ಎಂದು ವಿಮರ್ಶಕರು ಇವರನ್ನು ಹೊಗಳಿದ್ದಾರೆ.

	ಪ್ರೇಮಚಂದರು ಕಥಾಸಾಹಿತ್ಯ ಹಾಗೂ ಕಾದಂಬರಿ ಕ್ಷೇತ್ರಗಳಲ್ಲಿ ಹೆಚ್ಚಿನ ಸೇವೆ ಸಲ್ಲಿಸಿ 'ಕಾದಂಬರಿ ಸಾಮ್ರಾಟ' ಎಂದೇ ಪ್ರಸಿದ್ಧರಾಗಿದ್ದರೂ ಸಾಹಿತ್ಯದ ಇನ್ನಿತರ ಪ್ರಕಾರಗಳಲ್ಲೂ ಕೃತಿ ರಚಿಸಿದ್ದರು. ಅದರಲ್ಲೂ ನಾಟಕ ಮತ್ತು ಪ್ರಬಂಧ ಕ್ರೇತ್ರಗಳ ಇದರ ರಚನೆಗಳು ಸಾಕಷ್ಟಿವೆ. 

	ಪ್ರೇಮಚಂದರು ಒಟ್ಟು ಏಳು ನಾಟಕಗಳನ್ನು ಬರೆದಿದ್ದಾರೆ. 1922ರಲ್ಲಿ ಮೊದಲ ನಾಟಕ 'ಸಂಗ್ರಾಮ್ ಬರೆದರು. ಮುಸ್ಲಿಂ - ಹಿಂದೂ ಏಕತೆಯ ಉದ್ದೇಶದಿಂದ ಇವರು ಬರೆದ ಎರಡನೆಯ ನಾಟಕ `ಕರ್ಬಲಾ ಇದನ್ನು ಐತಿಹಾಸಿಕ ಧಾರ್ಮಿಕ ನಾಟಕ ಎಂದು ಲೇಖಕರೇ ಹೇಳಿಕೊಂಡಿದ್ದಾರೆ. ಇವಲ್ಲದೆ ಗಾಲ್ಸವರ್ದಿ ಮತ್ತು ಜಾರ್ಜ್ ಬರ್ನಾರ್ಡ್ ಷಾರಂತಹ ಇಂಗ್ಲಿಷ್ ಸಾಹಿತ್ಯದ ದಿಗ್ಗಜರ ನಾಟಕಗಳನ್ನು ಹಿಂದಿಗೆ ಅನುವಾದಿಸುವ ಮೂಲಕ ಪ್ರೇಮಚಂದರು ಹಿಂದೀ ನಾಟಕ ಕ್ಷೇತ್ರದಲ್ಲೂ ಸ್ಥಾನಗಳಿಸಿದ್ದಾರೆ.

ಪ್ರಬಂಧ ರಚನೆಯಲ್ಲಿ ಪ್ರೇಮಚಂದ್ ಸಿದ್ಧಹಸ್ತರು. ಗುಣಮಟ್ಟ ಹಾಗೂ ಸಂಖ್ಯೆ ಎರಡು ದೃಷ್ಟಿಗಳಿಂದಲೂ ಇವರು ಬೇರೆ ಬೇರೆ ಸಂದರ್ಭದಲ್ಲಿ ಬರೆದ ಲೇಖನಗಳಲ್ಲಿ ಹಲವು ಇಂದಿಗೂ ಪ್ರಸ್ತುತವೆನ್ನಿಸುವಂತಿದೆ.

ವ್ಯಾಪಕವಾದ ಬರವಣಿಗೆ, ಕುಟುಂಬ ನಿರ್ವಹಣೆಗಾಗಿ ವಿವಿಧ ಉದ್ಯೋಗಗಳು ಇವುಗಳ ನಡುವೆಯೂ ಭಾಷೆ ಮತ್ತು ಸಂಸ್ಕøತಿಯ ಪ್ರಚಾರಕ್ಕೆಂದು ಪ್ರೇಮಚಂದ್ ಇಡೀ ಭಾರತವನ್ನು ಸುತ್ತುತ್ತಿದ್ದರು. 1935ರಲ್ಲಿ ಮೈಸೂರಿನಲ್ಲಿ ದಕ್ಷಿಣ ಭಾರತ ಹಿಂದೀ ಪ್ರಚಾರ ಸಭೆಯ ಘಟಿಕೋತ್ಸವ ಸಮಾರಂಭ ನಡೆಯಿತು. ಅದರಲ್ಲಿ ಭಾಗವಹಿಸಲು ತಮ್ಮ ಪತ್ನಿ ಶಿವರಾಣಿದೇವಿಯೊಂದಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಅನೇಕ ಪ್ರೇಕ್ಷಣಿಯ ಸ್ಥಳಗಳಿಗೂ, ಕೆಲವು ಸಂಸ್ಥೆಗಳಿಗೂ ಭೇಟಿಕೊಟ್ಟಿದ್ದರು. ಅನಂತರ ಬೆಂಗಳೂರಿಗೂ ಬಂದಿದ್ದರು. ಶತಾಯುಷಿ ನಿಟ್ಟೂರು ಶ್ರೀನಿವಾಸರಾಯರ ಮನೆಯಲ್ಲಿ ಪತಿ ಪತ್ನಿಯರು ಅತಿಥಿಗಳಾಗಿದ್ದರು. ಮೈಸೂರು, ಬೆಂಗಳೂರು ನಗರಗಳನ್ನು ಅವರು ಬಹಳವಾಗಿ ಇಷ್ಟಪಟ್ಟಿದ್ದರು. ತಮ್ಮ ಪ್ರವಾಸದ ಅನುಭವಗಳನ್ನು `ಹಂಸ ಪತ್ರಿಕೆಯಲ್ಲಿ ದಾಖಲಿಸಿದ್ದಾರೆ.

ಕನ್ನಡ ಸಾಹಿತ್ಯದ ಬಗ್ಗೆ ಪ್ರೇಮಚಂದ್ ಗೌರವವನ್ನೂ ವ್ಯಕ್ತಪಡಿಸಿದ್ದಾರೆ.

"ಕನ್ನಡ ಮೈಸೂರಿನ ರಾಜ್ಯ ಭಾಷೆ. ಇದನ್ನು ಮಾತನಾಡುವವರ ಸಂಖ್ಯೆ ಸುಮಾರು ಒಂದೂವರೆ ಕೋಟಿ (ಈಗ ಈ ಸಂಖ್ಯೆ ಐದು ಕೋಟಿಗೆ ಏರಿದೆ) ಆದರೆ ಇವರೆಲ್ಲ ಬೇರೆ ಬೇರೆ ರಾಜ್ಯಗಳಲ್ಲಿ ಹಂಚಿಹೋಗಿದ್ದಾರೆ. ಕನ್ನಡದ ಪ್ರಾಚೀನ ಸಾಹಿತ್ಯ ಮೇಲು ದರ್ಜೆಯದು. ಹೊಸ ಸಾಹಿತ್ಯದಲ್ಲೂ ಒಳ್ಳೆಯ ಬೆಳವಣಿಗೆ ಆಗುತ್ತದೆ. ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ ಒಂದು ಭವನವಿದೆ. ಪುಸ್ತಕ ಭಂಡಾರವಿದೆ. ಸಂಸ್ಥೆಯ ಮೂಲಕ ಕನ್ನಡ ಸಾಹಿತ್ಯದ ಉತ್ಕøಷ್ಟ ಗ್ರಂಥಗಳು ಬೆಳಕಿಗೆ ಬರುತ್ತಿವೆ". ಕುಮಾರವ್ಯಾಸನ ಅಮರ ಕೃತಿ "ಭಾರತ" ಬಹುಶಃ ಕನ್ನಡದ ಸರ್ವೋತ್ಕøಷ್ಟ ಗ್ರಂಥ. ಇಂಥ ಕವಿಗಳು ಇಡೀ ಭಾರತದಲ್ಲಿ ನಾಲ್ಕಾರು ಮಂದಿ ಮಾತ್ರ ಇರಬಹುದು. ಎಂದು ಪ್ರೇಮಚಂದ್ ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಪ್ರೇಮಚಂದ್ ಅವರನ್ನು ಬಹಳವಾಗಿ ಆಕರ್ಷಿಸಿದ್ದು ಕೆಂಪು ತೋಟ (ಲಾಲ್‍ಬಾಗ್). ಬೆಂಗಳೂರಿನಲ್ಲಿ ಅವರು ಡಾ|| ಸಿ.ವಿ.ರಾಮನ್ ಅವರನ್ನು ಭೇಟಿಯಾಗಿದ್ದರು.
ಅವರು ಮೈಸೂರಿನಲ್ಲಿ ಐದು ದಿನ, ಬೆಂಗಳೂರಿನಲ್ಲಿ ನಾಲ್ಕು ದಿನ ಹೀಗೆ ಒಂಭತ್ತು ದಿನ ಕರ್ನಾಟಕದಲ್ಲಿದ್ದರು. ಹಿಂದೀ ಪ್ರಚಾರದ ಬಗ್ಗೆ ಆಸಕ್ತಿ ಸೂಚಿಸುವುದರ ಜೊತೆಗೇ ಕನ್ನಡ ನಾಡಿನ ಇತಿಹಾಸ, ಸಾಹಿತ್ಯ ಸಾಧನೆಗಳನ್ನು ಗುರುತಿಸಿದ್ದು ವಿಶೇಷ.

ಪ್ರೇಮಚಂದರು ಹಿಂದೀ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದ್ದು ಮಾತ್ರವಲ್ಲ ಉರ್ದು ಸಾಹಿತ್ಯಕ್ಕೂ ಇವರ ಕೊಡುಗೆ ಅಪಾರ. ಪ್ರೇಮಚಂದರ ಸಾಹಿತ್ಯವನ್ನು ವಿಮರ್ಶಿಸಿದ ಪ್ರೊ. ರಷೀದ್ ಅಹಮದ್ ಸಿದ್ದಿಕಿಯವರು. ಉರ್ದು ಸಾಹಿತ್ಯದಲ್ಲಿ ಪ್ರೇಮಚಂದರಿಗೆ ಮಿಗಿಲೆನಿಸುವ ಮತ್ತೊಬ್ಬ ಭಾರತೀಯನಿಲ್ಲ, ಭಾರತೀಯ ಕಾದಂಬರಿಕಾರನಿಲ್ಲ, ಎಂದಿದ್ದಾರೆ. ವಿಮರ್ಶಕರು ಉರ್ದು ಕಾವ್ಯದಲ್ಲಿ ಮಹಾಕವಿ ಇಕ್ಬಾಲ್ ಅವರಿಗಿರುವ ಸ್ಥಾನವನ್ನೇ ಗದ್ಯದಲ್ಲಿ ಪ್ರೇಮಚಂದರಿಗೆ ನೀಡಿ ಅವರನ್ನು "ಇನ್‍ಸಾನ್ ದೋಸ್ತ್ ಅದೀಚ್" (ಮಾನವತೆಯ ಮಿತ್ರಸಾಹಿತಿ) ಎಂದು ಗೌರವಿಸಿದ್ದಾರೆ.  	
							
	ಪ್ರೇಮಚಂದ್ ನಿಧನರಾದಾಗ (1936 ಅಕ್ಟೋಬರ್ 8 ರಂದು) ಇವರಿಗೆ 56 ವರ್ಷ, ಸಾಯುವ ಮೊದಲು ಮಹಾಜನೀ ಸಭ್ಯತಾ ಎಂಬ ಪ್ರಬಂಧವನ್ನು ಮುಗಿಸಿದ್ದರು. ಹಾಗೂ ಮಂಗಳಸೂತ್ರ ಕಾದಂಬರಿಯನ್ನು ಬರೆಯಲಾರಂಭಿಸಿದ್ದರು. ಇದನ್ನು ಮುಂದೆ ಅವರ ಮಗ ಅಮೃತರಾಯ ಪೂರ್ತಿಗೊಳಿಸಿದ್ದರು.
(ಟಿ.ಎಚ್.ಐ.)
ಪರಿಷ್ಕರಣೆ:
ಡಾ|| ಹೆಚ್. ಎಸ್. ಪಾರ್ವತಿ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ